ರೇಷ್ಮೆ -
ಕೆಲವು ನಿರ್ದಿಷ್ಟ ಕೀಟಗಳ ಲಾರ್ವಗಳು ಕೋಶಾವಸ್ಥೆ ಪ್ರವೇಶಕ್ಕೆ ಮುನ್ನ ಕೋಶಾವರಣ (ಕಕೂನ್) ಹಾಗೂ ಕೆಲವು ಕೀಟಗಳು ಜಾಲ (ವೆಬ್, ಬಲೆ) ನಿರ್ಮಿಸಲೋಸುಗ ಉತ್ಪಾದಿಸುವ ನಾರು ಅಥವಾ ಎಳೆ (ಸಿಲ್ಕ್). ವ್ಯಾವಹಾರಿಕ ಪರಿಭಾಷೆಯಲ್ಲಿ ಲೆಪಿಡಾಪ್ಟರ ಗಣದ ಅನೇಕ ಪತಂಗಗಳ, ವಿಶೇಷತಃ ಬಾಂಬಿಸಿಡೀ ಕುಟುಂಬ, ಬಾಂಬಿಕ್ಸ್ ಜಾತಿಯ ಬಾಂಬಿಕ್ಸ್ ಮೊರಿ ಪತಂಗಗಳ ಲಾರ್ವಗಳು; ಉತ್ಪಾದಿಸುವ ಹೊಳಪುಳ್ಳ ತಂತು ಹಾಗೂ ಅದರಿಂದ ತಯಾರಿಸುವ ದಾರ ಮತ್ತು ವಸ್ತ್ರ (ಸಿಲ್ಕ್). ಈ ಲಾರ್ವದ ರೂಢನಾಮವೇ ರೇಷ್ಮೆಹುಳು. ರೇಷ್ಮೆಹುಳು ಸಾಕಾಣಿಕೆಯಿಂದ ಮೊದಲ್ಗೊಂಡು ವಸ್ತ್ರ ತಯಾರಿಗೆ ಬೇಕಾದ ರೇಷ್ಮೆ ದಾರ ಉತ್ಪಾದನೆಯ ವರೆಗಿನ  ಒಟ್ಟಾರೆ ಪ್ರಕ್ರಿಯೆಯೇ ರೇಷ್ಮೆಕೃಷಿ (ಸೆರಿಕಲ್ಚರ್).

ಫೈಬ್ರಾಯಿನ್ ಪ್ರೋಟೀನ್, ಸೆರಿಸಿನ್ ಎಂಬ ಗೋಂದಿನಂಥ ಪ್ರೋಟೀನ್ ಇವೆರಡರಿಂದ ರೂಪುಗೊಂಡ ನೈಸರ್ಗಿಕ ಪ್ರೋಟೀನ್ ತಂತುವೇ ರೇಷ್ಮೆ. ಬಲು ನಾಜೂಕಾದ ಈ ಎಳೆಗಳು 300-900 ಮೀ ಉದ್ದವಿರುತ್ತವೆ. ಸ್ವಾಭಾವಿಕ ಹೊಳಪು ಮತ್ತು ಬಿಳಿ ಅಥವಾ ಕೆನೆಬಣ್ಣದ ಕಾಂತಿ ಇವುಗಳ ವೈಶಿಷ್ಟ್ಯ. 2.4-5.1 ಗ್ರಾಮ್/ಡೆನ್ಯೆರ್ ನಾಜೂಕಿನ ಅತ್ಯಂತ ಬಲಯುತ ತಂತುಗಳ ಪೈಕಿ ರೇಷ್ಮೆಯೂ ಒಂದು. ಒಣಗಿದ್ದಾಗ ಲಂಬನೆಯ (ಎಲಾಂಗೇಶನ್, ಎಲಾಸ್ಟಿಕ್ ರಿಕವರಿ) ವ್ಯಾಪ್ತಿ 10-25% ಒದ್ದೆಯಾಗಿದ್ದಾಗ 33%-35%. ವಸ್ತ್ರ ನೇಯುವ ಮುನ್ನ ಅಥವಾ ಆನಂತರ ರಂಗು ಹಾಕಬಹುದು. 

ಒಂದು ವರ್ಷದಲ್ಲಿ 1 ಅಥವಾ 2 ಅಥವಾ ಹೆಚ್ಚು ಜೀವನಚಕ್ರ ಪೂರೈಸುವ ಪತಂಗ ತಳಿಗಳಿವೆ. ಇವಕ್ಕೆ ಕ್ರಮವಾಗಿ ಏಕವೋಲ್ಟೈನ್, ದ್ವಿವೋಲ್ಟೈನ್ ಮತ್ತು ಬಹುವೋಲ್ಟೈನ್ ತಳಿಗಳೆಂದು ಹೆಸರು. ಪತಂಗ ಪ್ರಭೇದ, ತಳಿಯ ಬಗೆ, ಲಾರ್ವಾಗಳ ಆಹಾರದ ಗುಣ ಮುಂತಾದವನ್ನು ರೇಷ್ಮೆಯ ಗುಣ ಅವಲಂಬಿಸಿದೆ. ಪತಂಗ ಪ್ರಭೇದವನ್ನಾಧರಿಸಿ ರೇಷ್ಮೆ ಯನ್ನು ಹೆಸರಿಸುವ ಪದ್ಧತಿಯೂ ಉಂಟು. ಬಾಂಬಿಕ್ಸ್ ಜಾತಿಯ ಲಾರ್ವಾಗಳ ಆಹಾರ ಹಿಪ್ಪನೇರಿಳೆ ಎಲೆ. ಬೇರೆ ಎಲೆಗಳನ್ನು ತಿನ್ನುವ ಜಾತಿಗಳೂ ಉಂಟು. ಉದಾ: ಆಂತ್ರಿಯಾ ಪರ್ನಿಯಾ, ಆಂತ್ರಿಯಾ ಮೈಲಿಟ್ಟಾ, ಆಂತ್ರಿಯಾ ರಾಯೆಲಿ (ಟಸ್ಸಾ ರೇಷ್ಮೆ), ಆಂತ್ರಿಯಾ ಅಸ್ಸಾಮ (ಚಿನ್ನಹಳದಿ ರೇಷ್ಮೆ), ಸಾಮಿಯ ವಾಕೆರಿ (ಒರಟು ದರ್ಜೆಯ ರೇಷ್ಮೆ), ಫಿಲೊಸಾಮಿಯ ರಿಸಿನಿ (ಎರಿ ರೇಷ್ಮೆ). ಈ ಲೇಖನವನ್ನು ಜಗತ್ತಿನಾದ್ಯಂತ ವ್ಯಾಪಕ ಬಳಕೆಯಲ್ಲಿರುವ ಬಾಂಬಿಕ್ಸ್ ಮೊರಿ ಪತಂಗದಿಂದ ಉತ್ಪಾದಿಸುವ ರೇಷ್ಮೆಗೆ ಸೀಮಿತಗೊಳಿಸಿದೆ.

ರೇಷ್ಮೆಯ ಇತಿಹಾಸ: ಪ್ರಾಚೀನ ಮತ್ತು ಅರ್ವಾಚೀನ ತಂತ್ರಗಳ ಸಂಲಯನದಿಂದ ತಯಾರಾಗುತ್ತಿರುವ ಇಂದಿನ ರೇಷ್ಮೆಗೆ ಸು. 3000 ವರ್ಷಗಳ ರೋಚಕ ಇತಿಹಾಸವಿದೆ. ಸುಮಾರು ಕ್ರಿ.ಪೂ. 2700 ಆಸುಪಾಸಿನಲ್ಲಿ ಚೀನದಲ್ಲಿ ರೇಷ್ಮೆಯ ಆವಿಷ್ಕಾರವಾಯಿತೆಂದು ಪ್ರತೀತಿ. ಈ ಕುರಿತಾದ ಚೀನೀ ಐತಿಹ್ಯದ ಪ್ರಕಾರ ಚೀನದ ಖ್ಯಾತ ಚಕ್ರವರ್ತಿ ಹುವಾಂಗ್ ತೈ ಎಂಬಾತನ ಪತ್ನಿ ಸಿ-ಲಿಂಗ್-ಚೈಗೆ ರೇಷ್ಮೆಹುಳುವನ್ನೂ ಅದು ಉತ್ಪಾದಿಸುವ ದಾರವನ್ನೂ ಆವಿಷ್ಕರಿಸಿದ ಖ್ಯಾತಿ ಸಲ್ಲುತ್ತದೆ. ರೇಷ್ಮೆಕೃಷಿ ಹಾಗೂ ರೇಷ್ಮೆ ವಸ್ತ್ರ ತಯಾರಿಕೆಯ ವಿಧಾನಗಳ ರೂವಾರಿಯೂ ಆಕೆಯೇ ಎನ್ನಲಾಗಿದೆ. ರೇಷ್ಮೆಹುಳುಗಳ ದೇವತೆ ಎಂದು ಆಕೆಯನ್ನು ಚೀನೀಯರು ಪರಿಗಣಿಸುತ್ತಾರೆ. ಜಗತ್ತಿನಾದ್ಯಂತ ಬಲು ಬೇಡಿಕೆ ಇದ್ದ ಅಮೂಲ್ಯ ಪದಾರ್ಥವಾಗಿದ್ದರೂ ರೇಷ್ಮೆಕೃಷಿಯ ವಿಧಿವಿಧಾನಗಳನ್ನು ಚೀನೀಯರು ಅತಿ ಗೋಪ್ಯವಾಗಿರಿಸಿ ಸು. 3ನೆಯ ಶತಮಾನದವರೆಗೂ ರೇಷ್ಮೆಯ ಉತ್ಪಾದನೆ ಹಾಗೂ ಮಾರಾಟದ ಮೇಲೆ ಏಕಸ್ವಾಮ್ಯ ಸಾಧಿಸಿದ್ದರು. ಮೆಡಿಟರೇನಿಯನ್ ಸಾಗರದಿಂದ ಪೂರ್ವ ಚೀನದ ವರೆಗಿನ ಹೆದ್ದಾರಿಯನ್ನು ರೇಷ್ಮೆ ದಾರಿ (ಸಿಲ್ಕ್ ರೂಟ್) ಎಂದು ಹೆಸರಿಸಲು ಇದೇ ಕಾರಣ. ಆ ಶತಮಾನದ ಆದಿ ಭಾಗದಲ್ಲಿ ರೇಷ್ಮೆಕೃಷಿ ಕೊರಿಯದ ಮೂಲಕ ಜಪಾನನ್ನು ತಲಪಿತು. ತದನಂತರ ಭಾರತವನ್ನು ಪ್ರವೇಶಿಸಿತು. ಚೀನಿ ರಾಜಕುಮಾರಿಯೊಬ್ಬಳು ಹಿಪ್ಪನೇರಿಳೆ ಅಥವಾ ಉಪ್ಪುನೇರಿಳೆ (ಮಲ್‍ಬೆರಿ) ಗಿಡದ ಬೀಜ ಮತ್ತು ರೇಷ್ಮೆಹುಳುವಿನ ಮೊಟ್ಟೆಯನ್ನು ತನ್ನ ಮುಂಡಾಸಿನಲ್ಲಿ ಅಡಗಿಸಿ ಭಾರತಕ್ಕೆ ಒಯ್ದಳು ಎಂದೂ 522ರಲ್ಲಿ ಪರ್ಷಿಯನ್ ಸನ್ಯಾಸಿಗಳು ಮೊಟ್ಟೆಗಳನ್ನೂ ರೇಷ್ಮೆಕೃಷಿ ರಹಸ್ಯವನ್ನೂ ರೋವi.ನ್ ಸಾಮ್ರಾಜ್ಯಕ್ಕೆ ಚೀನದಿಂದ ಕದ್ದೊಯ್ದರು ಎಂದೂ ಪ್ರತೀತಿ. ತದನಂತರ ಯುರೋಪಿನ ಅನೇಕ ರಾಷ್ಟ್ರಗಳಿಗೆ ಹರಡಿದ ರೇಷ್ಮೆಕೃಷಿಯ ವಿಧಿವಿಧಾನಗಳಲ್ಲಿ ಅನೇಕ ಸುಧಾರಣೆಗಳಾಗಿವೆ. ಇಷ್ಟಾದರೂ ಅಮೆರಿಕ ಈ ಕೃಷಿಯಲ್ಲಿ ಸಾಪೇಕ್ಷವಾಗಿ ಯಶಸ್ವಿಯಾಗದಿರುವುದು ವಿಶೇಷ.

ರೇಷ್ಮೆಯ ಬಗ್ಗೆ ಪ್ರಾಚೀನ ಕಾಲದಿಂದಲೂ ಕುತೂಹಲ, ಆಕರ್ಷಣೆ ಗಳಿದ್ದುವು. ಕ್ರೈಸ್ತರ ಹಳೆಯ ಒಡಂಬಡಿಕೆಯ (ಓಲ್ಡ್ ಟೆಸ್ಟಮೆಂಟ್) ಇಜೀಕ್ ಪುಸ್ತಕದಲ್ಲಿ ರೇಷ್ಮೆಯ ಉಲ್ಲೇಖವಿದೆ. ಅರಿಸ್ಟಾಟಲ್ ಹಿಸ್ಟೋರಿಯ ಅನಿಮಾಲಿಯಮ್ ಕೃತಿಯಲ್ಲಿ ರೇಷ್ಮೆಯ ವಿವರ ನೀಡುತ್ತಾನೆ. ಕೋಸ್ ದ್ವೀಪದ ಪ್ರಾಚೀನ ಅವಶೇಷಗಳಲ್ಲಿ ಆ ದ್ವೀಪದ ಜನ ರೇಷ್ಮೆಯ ಆಮದಿನಿಂದ ಹೆಣೆದ ಕೊವಿಸ್ಟಿಸ್ ಬಟ್ಟೆಯೂ ಒಂದಾಗಿದೆ. ಕ್ರಿ.ಶ. ದ ಆರಂಭದಲ್ಲಿ ಪೂರ್ವ ದೇಶಗಳಿಂದ ರೋಮ್‍ಗೆ ರೇಷ್ಮೆ ರಫ್ತಾಗುತ್ತಿತ್ತು. ಅದಕ್ಕೆ ಚಿನ್ನದ ಮೌಲ್ಯವಿತ್ತಲ್ಲದೆ ಪುರುಷರು ರೇಷ್ಮೆ ಬಟ್ಟೆ ತೊಟ್ಟರೆ ಅಪಹಾಸ್ಯಕ್ಕೊಳಗಾಗುತ್ತಿದ್ದರು. ರೇಷ್ಮೆ ನಾರಿನಂಥ ಪದಾರ್ಥ, ಮರದ ತೊಗಟೆಯಡಿಯಲ್ಲಿ ಇದು ದೊರಕುತ್ತದೆಂಬ ತಪ್ಪು ತಿಳಿವಳಿಕೆಯೂ ಪ್ರಾಚೀನ ಕಾಲದಲ್ಲಿತ್ತು. ಎರಡನೆಯ ಶತಮಾನದಲ್ಲಿ ರೇಷ್ಮೆ ಉದ್ಯಮ ಈಜಿಪ್ಟ್, ಸಿರಿಯ, ಪ್ಯಾಲಸ್ತೀನ್‍ಗಳಲ್ಲಿ ಪ್ರವರ್ಧಮಾನಕ್ಕೆ ಬಂತು; ತರುವಾಯ ಪರ್ಷಿಯ, ಬಿeóÁನ್‍ಟೀಯನ್, ಫ್ರಾನ್ಸ್, ಇಂಗ್ಲೆಂಡ್ ಮುಂತಾದೆಡೆಗಳಲ್ಲಿ ಪ್ರಾಚುರ್ಯ ಪಡೆಯಿತು. ಹದಿನೆಂಟನೆಯ ಶತಮಾನದ ವೇಳೆಗೆ ಅಮೆರಿಕದಲ್ಲಿ ರೇಷ್ಮೆ ಕೃಷಿಯನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಸಹಾಯಧನ ನೀಡುವ ಕಾಯಿದೆಯನ್ನೂ ಜಾರಿಮಾಡಲಾಯಿತು(1783). 1865ರ ಸುಮಾರಿನಲ್ಲಿ ಜಪಾನಿ ರೇಷ್ಮೆ ಅತ್ಯುತ್ತಮವೆಂದು ಮಾನ್ಯತೆ ಪಡೆದಿತ್ತು. 

ಭಾರತದ ರೇಷ್ಮೆ ಕೃಷಿಯ ಬಗ್ಗೆ ಪ್ರಾಚೀನ ಸಂಸ್ಕøತ ಸಾಹಿತ್ಯದಲ್ಲಿ ಉಲ್ಲೇಖಗಳು ದೊರಕುತ್ತವೆ. ಪೌರಾಣಿಕ ಕಥೆಯೊಂದರಲ್ಲಿ ಕ್ರಿ.ಪೂ. ಸು. 140 ರಷ್ಟು ಹಿಂದೆ ರೇಷ್ಮೆ ಹುಳುವಿನ ಮೊಟ್ಟೆ ಮತ್ತು ಹಿಪ್ಪು ನೇರಳೆ ಬೀಜಗಳನ್ನು ಖೊಟಾನ್ (ದಕ್ಷಿಣ ಚೀನದ ಒಂದು ಪ್ರಾಂತ)ಗೆ ಸಾಗಿಸಿದುದರ ಉಲ್ಲೇಖವಿದೆ. ಬ್ರಹ್ಮಪುತ್ರಾ ಮತ್ತು ಗಂಗಾ ನದೀ ಬಯಲುಗಳಲ್ಲಿ ಮೊದಲು ರೇಷ್ಮಕೃಷಿ ನಡೆಯಿತೆಂದೂ ತರುವಾಯ ಪಶ್ಚಿಮ ಪರ್ಷಿಯ, ಮಧ್ಯ ಏಷ್ಯಗಳಿಗೆ ಹರಡಿತೆಂದೂ ಹೇಳಲಾಗುತ್ತದೆ.

ಕರ್ನಾಟಕದಲ್ಲಿ ರೇಷ್ಮೆ ಉದ್ಯಮ: ಕರ್ನಾಟಕದಲ್ಲಿ ರೇಷ್ಮೆಉದ್ಯಮದ ಉಗಮವನ್ನು ಖಚಿತವಾಗಿ ನಿರ್ಧರಿಸಲಾಗಿಲ್ಲವಾದರೂ ಕರ್ನಾಟಕದ ಹಿಂದಿನ ರಾಜವಂಶಗಳು ರೇಷ್ಮೆಯನ್ನು ವಿಶೇಷವಾಗಿ ಬಳಸುತ್ತಿದ್ದ ವೆಂಬುದನ್ನು ಗಮನಿಸಿದಾಗ ಅದರ ಬಳಕೆ ಶತಮಾನಗಳಷ್ಟು ಹಿಂದನ ದೆಂಬುದು ವೇದ್ಯವಾಗುತ್ತದೆ. ಈ ಉದ್ಯಮವನ್ನು ಕ್ರಮಬದ್ಧವಾಗಿ ಕರ್ನಾಟಕದಲ್ಲಿ ಪ್ರಾರಂಭಿಸಿದವರೆಂದರೆ ಹೈದರ್ ಅಲಿ ಮತ್ತು ಆತನ ಪುತ್ರ ಟಿಪ್ಪುಸುಲ್ತಾನ್ ಎಂಬುದು ದಾಖಲೆಗಳಿಂದ ತಿಳಿಯುತ್ತದೆ. ಇವರ ಕಾಲದಲ್ಲಿ ಉಚ್ಛ್ರಾಯಸ್ಥಿತಿಯಲ್ಲಿದ್ದ ಈ ಉದ್ಯಮ ಕಾಲಾನುಕ್ರಮ ದಲ್ಲಿ ಇಳಿಮುಖವಾಯಿತು. ಅನಂತರ ಮೈಸೂರು ಸಂಸ್ಥಾನದ ದಿವಾನ ರಾಗಿದ್ದ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಸಕ್ರಿಯ ಪ್ರಯತ್ನದ ಫಲವಾಗಿ 1914ರಲ್ಲಿ ರೇಷ್ಮೆ ಕೃಷಿ ಇಲಾಖೆ ಕಾರ್ಯೋನ್ಮುಖವಾಯಿತು. ಕೃಷಿ ಪ್ರಧಾನವಾದ ಈ ಉದ್ಯಮ ನಿರುದ್ಯೋಗ ನಿವಾರಣೆಯ ಹಾದಿಯಲ್ಲಿ ಪ್ರಮುಖ ಪಾತ್ರ ವಹಿಸಿದೆಯಲ್ಲದೆ ಗ್ರಾಮಾಂತರ ಜನರ ಆರ್ಥಿಕ ಸ್ಥಿತಿಯನ್ನೂ ಸುಧಾರಿಸಿ ದೇಶಕ್ಕೆ ವಿದೇಶಿ ವಿನಿಮಯವನ್ನು ಗಳಿಸಿಕೊಡುತ್ತಿದೆ.

ಕರ್ನಾಟಕದಲ್ಲಿ ಪ್ರಚಲಿತವಾಗಿರುವ ಮಲ್ಟಿವೋಲ್ಟೈನ್ ತಳಿಗಳಿಂದ ವರ್ಷದಲ್ಲಿ ಹಲವು ಬೆಳೆಗಳನ್ನು ಪಡೆಯಬಹುದು. ಈ ತಳಿಗೆ ಹಲವಾರು ವಿಶಿಷ್ಟ ಗುಣಗಳಿವೆ; ಅದ್ವಿತೀಯವಾದ ಹೊಳಪು, ನಯ, ನಾಜೂಕು, ಯಾವ ಬಣ್ಣಕ್ಕೇ ಆಗಲಿ ಹೊಂದಿಕೊಳ್ಳುವ ಸ್ವಭಾವ ಹಾಗೂ ರೋಗ ನಿರೋಧಕ ಸಾಮಥ್ರ್ಯ, ಇಷ್ಟೆಲ್ಲ ಒಳ್ಳೆಯ ಗುಣಗಳಿದ್ದರೂ ರೇಷ್ಮೆಯ ಇಳುವರಿ ಒಂದು ಗೂಡಿಗೆ ಕೇವಲ 200 ರಿಂದ 300 ಗಜಗಳು ಮಾತ್ರ. ರೇಷ್ಮೆ ಬಿಚ್ಚಾಣಿಕೆಯಲ್ಲಿಯೂ ಹೆಚ್ಚು ದಾರ ನಷ್ಟವಾಗುತ್ತದೆ. ಇದರಿಂದಾಗಿ ಸ್ಥಳೀಯ ತಳಿಗಳನ್ನು ಅಭಿವೃದ್ಧಿಪಡಿಸಿ, ಹೆಚ್ಚು ಪ್ರಮಾಣದಲ್ಲಿ ರೇಷ್ಮೆದಾರವನ್ನು ಪಡೆಯಬೇಕೆಂಬ ಪ್ರಯತ್ನ ನಡೆದು ಮಿಶ್ರತಳಿಗಳ ಉತ್ಪಾದನೆಗೆ ನಾಂದಿಯಾಯಿತು. ರೋಗರಹಿತವಾದ ಬಿತ್ತನೆ ಮೊಟ್ಟೆಗಳನ್ನು ಪ್ರತ್ಯೇಕಿಸಲು ಪ್ರತಿಯೊಂದು ತಾಯಿಚಿಟ್ಟೆಯನ್ನು ಅರೆದು ಸೂಕ್ಷ್ಮದರ್ಶಕದಲ್ಲಿ ಪ್ಯಾಶ್ಚರ್‍ಸಿಸ್ಟಮ್ ಮಾದರಿಯ ಮೊಟ್ಟೆ ಉತ್ಪಾದನೆಯನ್ನು ತೋರಿಸಿಕೊಟ್ಟವ ಇಟಲಿಯಿಂದ 1913ರಲ್ಲಿ ಭಾರತಕ್ಕೆ ಆಗಮಿಸಿದ್ದ ರೇಷ್ಮೆ ಕೃಷಿ ಪರಿಣತ ಸೈನರ್ ವಾಷಿಂಗ್ಟನ್ ಮಾರಿ ಎಂಬಾತ. 

ಮಿಶ್ರತಳಿ ಉತ್ಪಾದನೆಗೆ ಬೇಕಾದ ಬಿತ್ತನೆಯನ್ನು ಅಂದರೆ, ಗಂಡು ಚಿಟ್ಟೆಯನ್ನು ಜಪಾನ್, ಇಟಲಿ, ಚೀನಗಳಲ್ಲಿ ರೂಢಿಯಲ್ಲಿದ್ದ ಉತ್ಕøಷ್ಟ ವಾದ ಯುನಿವೋಲ್ಟೈನ್ ಮತ್ತು ಬೈವೋಲ್ಟೈನ್ ತಳಿಗಳನ್ನು ಆಮದು ಮಾಡಿಕೊಳ್ಳಲಾಯಿತು. ಈ ಕಾರ್ಯಕ್ಕಾಗಿ 1919ರಲ್ಲಿ ಜಪಾನಿನ ಯೋನಿಮುರ ಎಂಬ ತಜ್ಞನ ಸೇವೆಯನ್ನು ಪಡೆಯಲಾಯಿತು. ಆಮದು ಮಾಡಿಕೊಂಡ ಯುನಿವೋಲ್ಟೈನ್ ಮತ್ತು ಬೈವೋಲ್ಟೈನ್ ತಳಿಗಳಿಂದ ಉತ್ಪತ್ತಿಯಾದ ಗೂಡುಗಳಲ್ಲಿ ಉತ್ತಮದರ್ಜೆಯ ರೇಷ್ಮೆದಾರ ಹೆಚ್ಚು ಪ್ರಮಾಣದಲ್ಲಿದೆ. ಇಂಥ ಗೂಡುಗಳಿಂದ ಬರುವ ಗಂಡು ಚೆಟ್ಟೆಯನ್ನು ಸ್ಥಳೀಯ ಮಲ್ಟಿಮೋಲ್ಟೈನ್ ಗೂಡಿನಿಂದ ಬರುವ ಹೆಣ್ಣು ಚಿಟ್ಟೆಯೊಂದಿಗೆ ಸಂಕರ ಮಾಡಲಾಯಿತು. ಇದರಿಂದರ ಉತ್ಪಾದನೆಗೊಂಡ ರೇಷ್ಮೆ ಗೂಡು ಗಣನೀಯವಾಗಿ ಉತ್ತಮ ದರ್ಜೆಯದಾಗಿತ್ತು. ಇದರಿಂದಾಗಿ ಒಳ್ಳೆಯ ಧಾರಣೆಯೂ ಸಿಕ್ಕಿತಲ್ಲದೆ ರೇಷ್ಮೆ ಬಿಚ್ಚುವವರಿಗೆ ಹಿಂದೆ ಇದ್ದ ನಷ್ಟ, ತೊಡಕುಗಳು ಇಲ್ಲವಾದವು; ಮಿಶ್ರತಳಿಗಳನ್ನು ಸಾಕುವುದು ಜನಾದರಣೀಯವಾಯಿತು.
ಮಿಶ್ರತಳಿಗಳಿಗೆ ಬೇಕಾದ ವಿದೇಶಿ ಮತ್ತು ಸ್ವದೇಶಿ ತಳಿಗಳನ್ನು ಬಿತ್ತನೆಗೆ ಒದಗಿಸಿಕೊಳ್ಳುವ ಕ್ರಮ: ಈ ಎರಡೂ ತಳಿಗಳ ಮೂಲಸಂತತಿಯನ್ನು ಸದೃಢವಾಗಿಯೂ ರೋಗರಹಿತವಾಗಿಯೂ ಬೆಳೆಸಬೇಕಾದುದು ಅಗತ್ಯ. ಇದಕ್ಕಾಗಿ ವಿಶೇಷ ಸೌಲಭ್ಯಗಳು ಬೇಕು. ವೈಜ್ಞಾನಿಕ ರೀತಿಯಲ್ಲಿ ಯೋಗ್ಯ ಮತ್ತು ಹೊಂದಿಕೊಳ್ಳುವ ಹವಾಗುಣದಲ್ಲಿ ಪಾಲನೆಮಾಡಿ ಈ ಮೂಲತಳಿಗಳನ್ನು ವೃದ್ಧಿಪಡಿಸಬೇಕಾದುದು ಅಗತ್ಯ ಮತ್ತು ಅನಿವಾರ್ಯ.

ವಿದೇಶಿತಳಿ ಅಭಿವೃದ್ಧಿಗಾಗಿ ಬೆಟ್ಟದ ಮೇಲೆ ಸಾಕಗೆ (ಹಿಲ್ ಅಮಿಲಿಯೋರೇಷನ್): ಈ ಕ್ರಮದಲ್ಲಿ ಪಾಲನೆಗೊಂಡ ವಿದೇಶಿತಳಿಗಳು ತಮ್ಮ ಮೂಲ ಸ್ವಭಾವದಂತೆಯೇ ವರ್ತಿಸುವುವು.  ಅವುಗಳ ಮೂಲ ಸ್ಥಳದ ಹವಾಗುಣವನ್ನು ಬಲುಮಟ್ಟಿಗೆ ಹೋಲುವ ವಾತಾವರಣ ಬೆಟ್ಟಪ್ರದೇಶದಲ್ಲಿ ಇರುವುದನ್ನು ಮನಗಂಡ ಕರ್ನಾಟಕ ಸರ್ಕಾರ ಸಮುದ್ರಮಟ್ಟದಿಂದ ಸು. 1,400 ಮೀ ಎತ್ತರವಿರುವ ಬಿಳಿಗಿರಿರಂಗನ ಬೆಟ್ಟದಲ್ಲಿ ಒಂದು ಕೃಷಿಕೇತ್ರವನ್ನು ಪ್ರಾರಂಭಿಸಿತು. ಇಲ್ಲಿ ಸಾಕಲಾಗುತ್ತಿರುವ ತಳಿಗಳನ್ನು P3 ಪೀಳಿಗೆಯವು ಎಂದು ಕರೆಯಲಾಗುತ್ತದೆ. ಇಲ್ಲಿ ಬೆಳೆದ ಗೂಡುಗಳಿಂದ ಬರುವ ಚಿಟ್ಟೆಗಳನ್ನು ಪರಸ್ಪರ ಸಂಕರ ಮಾಡಿ ಪಡೆಯುವ ಮೊಟ್ಟೆಗಳನ್ನು ಬಯಲು ಪ್ರದೇಶದಲ್ಲಿರುವ ಸರ್ಕಾರಿ ಸ್ವಾಮ್ಯದ ಕೃಷಿಕ್ಷೇತ್ರಗಳಲ್ಲಿ ಬಹಳ ಎಚ್ಚರಿಕೆಯಿಂದ ತಾಂತ್ರಿಕ ವಿಧಿವಿಧಾನಗಳನ್ನು ಅನುಸರಿಸಿ ಸ್ಥಳೀಯ ವಾತಾವರಣಕ್ಕೆ ಹೊಂದಿ ಕೊಳ್ಳುವಂತೆ ಸಾಕಣೆ ಮಾಡಲಾಗುವುದು. ಈ ಹುಳುಗಳು ಕಟ್ಟಿದ ಗೂಡುಗಳಿಂದ ಹೊರಬರುವ ಚಿಟ್ಟೆಗಳನ್ನು ಸಂಕರಣಮಾಡಿ ಪಡೆದ ಮೊಟ್ಟೆಗಳಿಗೆ P2ಪೀಳಿಗೆ ಎಂದು ಹೆಸರು. ಈ ಮೊಟ್ಟೆಗಳನ್ನು ಇಲಾಖೆಯ ವತಿಯಿಂದ ತರಬೇತಿ ಪಡೆದ. ನೀರಾವರಿ ಸೌಲಭ್ಯವಿರುವ ಪ್ರದೇಶಗಳ ಲ್ಲಿರುವ ಆಯ್ಕೆಮಾಡಲ್ಪಟ್ಟ ರೈತರಿಗೆ ಹಂಚಲಾಗುವುದು. ಈ ರೈತರು ಸಾಕುವ ಹುಳುಗಳಿಂದ ಕಟ್ಟಲ್ಪಟ್ಟ ಗೂಡುಗಳು P1ಪೀಳಿಗೆಯವು ಎನಿಸುತ್ತವೆ. ಈ ಗೂಡುಗಳನ್ನೇ ಮಿಶ್ರತಳಿ ತಯಾರಿಕೆ ಯಲ್ಲಿ ಗಂಡು ಚಿಟ್ಟೆಗಾಗಿ ಉಪಯೋಗಿಸಲಾಗುತ್ತದೆ. 
ಈ ಗೂಡುಗಳನ್ನೇ ಮಿಶ್ರತಳಿ ಉತ್ಪಾದನೆಗೆ ಉಪಯೋಗಿಸುವ ವಿದೇಶಿತಳಿಯ ಬಣ್ಣ ಬಿಳಿಯದಾಗಿರುವುದರಿಂದ ರೂಢಿಯಲ್ಲಿ ಅದನ್ನು ಬಿಳಿಗೂಡು ಎಂದೇ ಕರೆಯಲಾಗುತ್ತಿದೆ. ಅಧಿಕ ರೇಷ್ಮೆ ಉತ್ಪನ್ನಕ್ಕೆ ಮಿಶ್ರತಳಿ ಉತ್ಪಾದನೆಯೇ ಮೂಲ. ಬಿಳಿಗೂಡಿಗಾಗಿ ಈ ತಳಿಗಳನ್ನು ದ್ವಿಗುಣಗೊಳಿಸಿಕೊಂಡು ಮಿಶ್ರತಳಿ ಉತ್ಪನ್ನದಲ್ಲಿ ಪ್ರಗತಿ ಸಾಧಿಸ ಲಾಗುತ್ತಿದೆ.
ಮೈಸೂರು ತಳಿ: ಮಿಶ್ರತಳಿಗಳಿಗೆ ಬೇಕಾದ ಮಲ್ಟಿವೋಲ್ಟೈನ್ ಸಂತತಿಯನ್ನು (ಮೈಸೂರು ತಳಿ) ತುಮಕೂರು ಜಿಲ್ಲೆಯ ಕುಣಿಗಲು, ಕೆಂಪಹಳ್ಳಿ, ಹುಲಿಯೂರುದುರ್ಗ, ಹೆಬ್ಬೂರು, ಸಂತೆಮಾವತ್ತೂರು ಇತ್ಯಾದಿ ಸ್ಥಳಗಳಲ್ಲಿಯೂ ಬೆಂಗಳೂರು ಜಿಲ್ಲೆಯ ಮಾಗಡಿ, ಬಿಡದಿ, ದೊಡ್ಡಬಳ್ಳಾಪುರ ಕಡೆಗಳಲ್ಲಿಯೂ ಬೆಳೆಸಲಾಗುತ್ತಿದೆ. ಈ ಪ್ರದೇಶದಲ್ಲಿ ಬೇರೆ ಇನ್ನಾವುದೇ ಜಾತಿಯ ರೇಷ್ಮೆ ಹುಳುಗಳನ್ನೂ ಸಾಕಬಾರದೆಂಬ ಕಾನೂನು ಉಂಟು. ಸರ್ಕಾರಿ ಮೂಲದಿಂದ ತಯಾರಾದ ಮೊಟ್ಟೆಗಳನ್ನು ಮಾತ್ರವೇ ರೈತರು ಸಾಕಬೇಕು. ತಾಂತ್ರಿಕಸಲಹೆ ಸಹಾಯಗಳಿಗಾಗಿ ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸರ್ಕಾರಿ ಸ್ವಾಮ್ಯದ ರೇಷ್ಮೆ ಕೃಷಿಕೇತ್ರಗಳಲ್ಲಿ ಒಂದು ತಾಯಿ ಚಿಟ್ಟೆ ಇಟ್ಟ ಮೊಟ್ಟೆಗಳನ್ನು ಪ್ರತ್ಯೇಕವಾಗಿ ಸಾಕಣೆಮಾಡಿ ಸೆಲ್ಯೂಲಾರ್ ರೇರಿಂಗ್ ಇದೇ ರೀತಿ ಮತ್ತೊಂದು ಚಿಟ್ಟೆಯ ಮೊಟ್ಟೆಗಳನ್ನು ಪ್ರತ್ಯೇಕವಾಗಿ ಸಾಕಿ ಇವುಗಳ ಗೂಡಿನಿಂದ ಬರುವ ಚಿಟ್ಟೆಗಳನ್ನು ಸಂಕರಣಮಾಡಿ ಮೂಲತಳಿಯನ್ನಾ ಗಿಟ್ಟು ಅಭಿವೃದ್ದಿಪಡಿಸಲಾಗುತ್ತಿದೆ. (ಸೆಲ್ಯೂಲಾರ್ ರೇರಿಂಗ್‍ನಲ್ಲಿ ಪಡೆದ ಗೂಡುಗಳು (P3 ಪೀಳಿಗೆ) ಮೂಲ ಬಿತ್ತನೆಯೆನಿಸುವುವು. ಹೀಗೆ ಪಡೆಯಲಾದ ಮೊಟ್ಟೆಗಳನ್ನು ಆಯ್ಕೆಮಾಡಲ್ಪಟ್ಟ ಪರಿಣತ ರೈತರಿಗೆ ಕೊಟ್ಟೋ ಇಲ್ಲವೆ ಸರ್ಕಾರಿ ಸ್ವಾಮ್ಯದಲ್ಲಿರುವ ಹಿಪ್ಪನೇರಳೆ ತೋಟವುಳ್ಳ ಕ್ಷೇತ್ರಗಳಲ್ಲೂ ದ್ವಿಗುಣಗೊಳಿಸಲಾಗುವುದು. ಈ ಗೂಡುಗಳು P2 ಪೀಳಿಗೆಯ ಬಿತ್ತನೆಯೆನಸುವುವು. ಈ ಗೂಡುಗಳಿಂದ ಸಿದ್ಧವಾದ ಮೊಟ್ಟೆಗಳನ್ನು ಪರವಾನಿಗೆ ಪಡೆದ ಉಳಿದ ರೈತರು ಸಾಕಣಿ ಮಾಡುತ್ತಾರೆ. ಅಲ್ಲಿಂದ ಉತ್ಪತ್ತಿಯಾಗುವ ಗೂಡುಗಳು P1ಪೀಳಿಗೆಯವು ಎನಿಸುತ್ತವೆ ಹಾಗೂ ಈ ಗೂಡುಗಳನ್ನು ಮಿಶ್ರತಳಿಗೆ ಬೇಕಾಗುವ ತಾಯಿಚಿಟ್ಟೆಯ ಉತ್ಪಾದನೆಗೆ ಉಪಯೋಗ ಮಾಡಲಾಗುತ್ತದೆ. ಮೈಸೂರು ತಳಿಯ ನ್ನುಳಿದು ಬೇರೆ ಇನ್ನಾವ ತಳಿಯನ್ನೂ ಸಾಕದಂತೆ, ಸರ್ಕಾರದವರಿಂದ ಸರಬರಾಜು ಆದ ತತ್ತಿಗಳ ವಿನಾ ಬೇರೆ ಇನ್ನಾವ ತಳಿಯನ್ನೂ ಸಾಕದಂತೆ, ಬೆಳೆದ ಗೂಡುಗಳನ್ನು ಸರ್ಕಾರದ ಅಧಿಕೃತ ಮಾರುಕಟ್ಟೆಗಳಲ್ಲಿ ನಿಯಮ ಗಳಿಗನುಸಾರವಾಗಿ ಅನುಜ್ಞಪತ್ರ ಪಡೆದವರಿಗೆ ಮಾತ್ರ ಮಾರುವಂತೆ ಬಿತ್ತನೆಗೂಡಿನ ಹಂಚಿಕೆ ಮತ್ತು ಸರಬರಾಜಿನ ನಿಯಂತ್ರಣವನ್ನು ಜಾರಿಗೆ ತಂದಿರುವುದರಿಂದಲೂ ಬಿತ್ತನೆಕ್ಷೇತ್ರವನ್ನು ಹಲವು ವಲಯಗಳನ್ನಾಗಿ ವಿಂಗಡಿಸಿ ಪ್ರತಿಯೊಂದು ವಲಯಕ್ಕೂ ಒಬ್ಬ ಅಧಿಕಾರಿಯನ್ನು ನೇಮಿಸಿರುವುದರಿಂದ ಮಿಶ್ರತಳಿಗೆ ಬೇಕಾದ ತಾಯಿ ಚಿಟ್ಟೆಯನ್ನು ಕೊಡುವ ರೋಗರಹಿತ ಗೂಡುಗಳನ್ನು ಆಯ್ಕೆಮಾಡುವುದು ಬಲು ಸುಲಭವಾಗಿದೆ.
ಕೇಂದ್ರ ಸರ್ಕಾರದ ಪ್ರೋತ್ಸಾಹ: 1875ರಲ್ಲಿ ಇಪ್ಪತ್ತು ಲಕ್ಷಪೌಂಡು ರೇಷ್ಮೆಯನ್ನು ವಿದೇಶಗಳಿಗೆ ರಫ್ತುಮಾಡುತ್ತಿದ್ದ ಭಾರತದ ರೇಷ್ಮೆ ಉತ್ಪಾದನೆ ಕ್ರಮೇಣ ಕ್ಷೀಣಿತೊಡಗಿತು. ಇದಕ್ಕೆ ಕಾರಣವೆಂದರೆ ರೇಷ್ಮೆಹುಳುಗಳಿಗೆ ಮಾರಕವಾಗಿ ಕಾಣಿಸಿಕೊಂಡ ಗಂಟುರೋಗದ ಹಾವಳಿ. ರೇಷ್ಮೆಕೃಷಿಯನ್ನು ಮಾರಕರೋಗಗಳಿಂದ ಮುಕ್ತಗೊಳಿಸಿ ಸುದೃಢವಾಗಿ ಬೆಳೆಸಿ ಉಳಿಸಲೆಂದು ಈ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಪ್ರತ್ಯೇಕ ಇಲಾಖೆ 1915ರಲ್ಲಿ ಪ್ರಾರಂಭವಾಯಿತು. ಉತ್ಪಾದನಾವೆಚ್ಚಕ್ಕಿಂತ ಅತಿಕಡಿಮೆ ಬೆಲೆಯಲ್ಲಿ ಮಾರಾಟ ಮಾಡಬೇಕಾದ ಪರಿಸ್ಥಿತಿ 1928ರಲ್ಲಿ  ಉದ್ಭವಿಸಿತು. ರೇಷ್ಮೆಮಾರಾಟ ತೀವ್ರ ಪೈಪೋಟಿಗೆ ಒಳಗಾಯಿತು. ಈ ಕೃಷಿಯಲ್ಲಿ ತೊಡಗಿದ್ದವರು ವಿವಂಚನೆಗೊಳಗಾಗ ಬೇಕಾಯಿತು. ರಫ್ತುವ್ಯಾಪಾರ ಸ್ಥಗಿತಗೊಂಡಿತು. ಈ ಸಂದರ್ಭವನ್ನು ಉಪಯೋಗಿಸಿ ಕೂಂಡು ಚೀನ ತನ್ನ ರೇಷ್ಮೆಯನ್ನು ಕಡಿಮೆ ದರದಲ್ಲಿ ಭಾರತಕ್ಕೆ ರಫ್ತು ಮಾಡಲು ಪ್ರಾರಂಭಮಾಡಿತು. ಜೊತೆಗೆ ಕೃತಕ ರೇಷ್ಮೆಯೂ ಜನಾದರಣೀಯವಾಯಿತು. ಮೊದಲೇ ದುರವಸ್ಥೆಯಲ್ಲಿದ್ದ ಈ ಉದ್ಯಮಕ್ಕೆ ಮತ್ತಷ್ಟು ಪೆಟ್ಟು ಬಿತ್ತು. ಇದನ್ನು ಮನಗಂಡ ಭಾರತ ಸರ್ಕಾರ 1932ರಲ್ಲಿ ಈ ಕೈಗಾರಿಕೆಯ ರಕ್ಷಣೆಗೆ ಮುಂದಾಯಿತು. ವಿದೇಶಗಳಿಂದ ಆಮದಾಗುತ್ತಿದ್ದ ರೇಷ್ಮೆಯ ಮೇಲೆ ಕರಭಾರ ಹೇರಿತು. ಇದರ ಪರಿಣಾಮವಾಗಿ ಸ್ಥಳೀಯ ರೇಷ್ಮೆಯ ಬೆಲೆ ಚೇತರಿಸಿಕೊಂಡಿತು.  

ರೇಷ್ಮೆಕೃಷಿಯನ್ನು ಉತ್ತಮಪಡಿಸಲು ರೂಪುಗೂಂಡ ಸಲಹಾ ಸಮಿತಿ: ಕರ್ನಾಟಕದಲ್ಲಿ 1951ರಲ್ಲಿ ನಡೆದ ರೇಷ್ಮೆ ಕೈಗಾರಿಕೆಯ ವಿಚಾರಗೋಷ್ಠಿಯ ಸಲುವಾಗಿ ಈ ಉದ್ಯಮ ಪ್ರಗತಿಪಥದಲ್ಲಿ ಮುಂದೆ ಸಾಗಲು ಅವಕಾಶವಾಯಿತು. ಈ ಉದ್ಯಮದ ವಿವಿಧ ಕ್ಷೇತ್ರಗಳಲ್ಲಿ ದುಡಿದ ಅನುಭವಿಗಳು, ವಿಜ್ಞಾನಿಗಳನ್ನು ಒಳಗೊಂಡ ಸಮಿತಿ ನೀಡಿದ ಅತಿಮುಖ್ಯ ಸಲಹೆಗಳೆಂದರೆ ರೇಷ್ಮೆ ಕೃಷಿ ಸಂಶೋಧನೆ, ಶಿಕ್ಷಣ, ರೋಗರಹಿತ ಮೊಟ್ಟೆಗಳ ಉತ್ಪಾದನೆ, ರೇಷ್ಮೆಗೂಡಿನ ವಿತರಣೆ ಹತೋಟಿಯನ್ನು ಕಾನೂನಿನ ಕಕ್ಷೆಗೊಳಪಡಿಸುವುದು, ರೇಷ್ಮೆವ್ಯಾಪಾರದಲ್ಲಿನ ಅಹಿತಕರ ಬೆಳೆವಣಿಗೆಗಳನ್ನು ತಪ್ಪಿಸುವುದು ಇತ್ಯಾದಿಗಳು.

ರೇಷ್ಮೆಕೃಷಿ ಮಾಡುವ ಜಿಲ್ಲೆಗಳು: ರೇಷ್ಮೆಉದ್ಯಮ ಕರ್ನಾಟಕದ ಮೈಸೂರು, ಮಂಡ್ಯ, ಬೆಂಗಳೂರು, ಕೋಲಾರ ಜಿಲ್ಲೆಗಳಲ್ಲಿ ಹೆಚ್ಚಿನ ವ್ಯಾಪ್ತಿಯಲ್ಲಿದೆ. ಇತ್ತೀಚೆಗೆ ಈ ಉದ್ಯಮವನ್ನು ಧಾರವಾಡ, ಬಿಜಾಪುರ, ಬೆಳಗಾಂವಿ, ಬಳ್ಳಾರಿ, ರಾಯಚೂರು, ಹಾಸನ, ಶಿವಮೊಗ್ಗ ಜಿಲ್ಲೆಗಳಿಗೂ ವಿಸ್ತರಿಸಿದೆ. ಈ ಉದ್ಯಮ ಕೃಷಿಪ್ರಧಾನವಾಗಿದ್ದು ಗ್ರಾಮಾಂತರದಲ್ಲಿನ ಜನಗಳ ಜೀವನಾಧಾರವನಿಸಿದೆ. 
ಮೈಸೂರು ತಳಿ ಸಾಕಣೆಗೆ ಬೇಕಾಗುವ ದಿವಸಗಳಿಗಿಂತ ಬಹಳ ಕಡಿಮೆ ದಿವಸಗಳೊಳಗೆ ಮಿಶ್ರತಳಿಗಳು ಫಲ ಕೊಡುವುದರಿಂದ ಕಡಿಮೆ ಅವಧಿಯಲ್ಲಿ ಉತ್ತಮ ಗುಣಮಟ್ಟದ, ಹಿಂದಿನ ತಳಿಗಳಿಗಿಂತ ಹೆಚ್ಚು ಬೆಲೆ ತರುವ ಗೂಡುಗಳನ್ನು ಬೆಳೆಯುವುದು ರೇಷ್ಮೆ ಬೆಳೆಗಾರರಿಗೂ ರೇಷ್ಮೆ ಬಿಚ್ಚುವವರಿಗೂ ಅನುಕೂಲವಾಗಿರುವುದರಿಂದ ಈ ತಳಿಗಳ ಸಾಕಣೆ ಹೆಚ್ಚು ಜನಪ್ರಿಯವಾಗಿದೆ.
ರೇಷ್ಮೆಹುಳು ಸಾಕಣೆಯಲ್ಲಿ ಸುಧಾರಣೆ: ರೇಷ್ಮೆಹುಳುಗಳು ತಮ್ಮ ಲಾರ್ವ ಅವಸ್ಥೆಯಲ್ಲಿ ನಾಲ್ಕು ಬಾರಿ ಪೊರೆ ಕಳಚುತ್ತವೆ. ಆಗತಾನೆ ಮೊಟ್ಟೆಯಿಂದ ಹೊರಬಂದ ಮರಿಗಳಿಗೆ ರೂಢಿಯಲ್ಲಿ ಚಾಕಿ ಎಂದೂ ಪೊರೆ ಕಳಚುವ ಅವಸ್ಥೆಯಲ್ಲಿರುವ ಮರಿಗಳಿಗೆ ಜ್ವರ ಎಂದೂ ಹೆಸರು. ಎಳೆಯ ಹುಳುಗಳನ್ನು ಮೂರನೆಯ ಜ್ವರದವರೆಗೆ ಸಾಕುವ ತನಕ ಬಲು ಎಚ್ಚರಿಕೆ ವಹಿಸಬೇಕಾಗುತ್ತದೆ. ಏಕೆಂದರೆ ಬೆಳೆ ಸುದೃಢವಾಗಿ ಒಳ್ಳೆಯ ಫಲ ನೀಡಬೇಕಾದರೆ ಎಳೆಯ ವಯಸ್ಸಿನ ಹುಳುಗಳ ಸಾಕಣೆ ಅತಿಮುಖ್ಯ. ಈ ಕಾರಣಕ್ಕಾಗಿಯೇ ಸರ್ಕಾರದ ವತಿಯಿಂದ ಸ್ಥಾಪಿತವಾಗಿರುವ ಚಾಕಿ ಸಾಕಣೆಕೇಂದ್ರದಲ್ಲಿ, ರೈತರು ತಂದುಕೊಡುವ ಮೊಟ್ಟೆಗಳನ್ನು 2-3ನೆಯ ಜ್ವರದವರೆಗೆ ಇಲಾಖೆಯ ತಾಂತ್ರಿಕ ಸಿಬ್ಬಂದಿಯ ನೇರ ಉಸ್ತುವಾರಿಯಲ್ಲಿ ಸಾಕಿ ರೈತರಿಗೆ ಕೊಡಲಾಗುವುದು. ವಯಸ್ಸಿಗೆ ಅನುಗುಣವಾಗಿ ಉತ್ತಮ ಸೊಪ್ಪು ಕೊಡುವುದು, ಯುಕ್ತ ಉಷ್ಣತೆ, ಆದ್ರ್ರತೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಅಗತ್ಯ. ಹುಳು ಸಾಕಣೆಯಲ್ಲಿ ಬೇಕಾದ ಉಷ್ಣಾಂಶ ಮತ್ತು ಶೈತ್ಯಾಂಶಗಳ ವಿವರ:
	ಹುಳುವಿನ ಹಂತ	ಉಷ್ಣಾಂಶ 	ಆದ್ರ್ರತೆ
	1ನೆಯ ಹಂತ	75-800 ಫ್ಯಾ	80%-90%
	2ನೆಯ ಹಂತ	74-790 ಫ್ಯಾ	80%-90% 
	3ನೆಯ ಹಂತ	73-780 ಫ್ಯಾ	80%
	4ನೆಯ ಹಂತ	72-770 ಫ್ಯಾ	70%-75%
	5ನೆಯ ಹಂತ	70-760 ಫ್ಯಾ	65%-70%

ಈಗ ಪ್ರಚಲಿತವಿರುವ ಮಿಶ್ರತಳಿಗಳ ಜೊತೆಗೆ ಹೊಸದಾಗಿ ಬೈವೋ ಲ್ಟೈನ್ ಮಾದರಿಯ ವಿದೇಶಿತಳಿಗಳನ್ನು ಪ್ರಚಾರಕ್ಕೆ ತರಲಾಗಿದೆ. ಈ ತಳಿಗಳ ಮೊಟ್ಟೆಗಳು ಚಾಕಿಯಾಗಲು 4-6ತಿಂಗಳುಗಳು ಬೇಕಾಗುತ್ತದೆ. ಅವುಗಳನ್ನು ಕೃತಕರೀತಿಯಲ್ಲಿ ಚಾಕಿಯಾಗುವಂತೆ ಮಾಡಿ ರೈತರಿಗೆ ಹಂಚಲಾಗುತ್ತದೆ. ಇವುಗಳಿಂದ ಬೆಳೆಯಲಾಗಿರುವ ಗೂಡುಗಳು ಶ್ರೇಷ್ಟಗುಣಮಟ್ಟದವು. ಇಳುವರಿ ಆಶಾದಾಯಕವಿದ್ದು ಪ್ರೋತ್ಸಾಹ ಗಣನೀಯವಾಗಿ ಹೆಚ್ಚುತ್ತಿದೆ.

ರೇಷ್ಮೆ ಉದ್ಯಮದಲ್ಲಿ ದೊರೆಯುವ ಇತರ ಉಪೋತ್ಪನ್ನಗಳು : 1 ರೇಷ್ಮೆ ಹುಳುಸಾಕಣೆಯಲ್ಲಿ ಬೀಳುವ ಹಿಕ್ಕೆ, 2. ರೇಷ್ಮೆ ನೂಲು ಬಿಚ್ಚಲು ಉಪಯೋಗಿಸಿದ ನೀರು, 3. ನೂಲು ಬಿಚ್ಚಿದ ಅನಂತರ ಉಳಿಯುವ ಹುಳು ಹಿಂದೆ ಗೊಬ್ಬರವಾಗಿ ಉಪಯೋಗವಾಗುತ್ತಿತ್ತು. ಆದರೆ ಇಂದು ಇವುಗಳಿಂದ ಎಣ್ಣೆಯನ್ನೂ ಪ್ರೋಟೀನನ್ನೂ ತೆಗೆಯಲಾಗುತ್ತದೆ. ಎಣ್ಣೆಯನ್ನು ಸೋಪು ತಯಾರಿಕೆಯಲ್ಲಿಯೂ ಪ್ರೋಟೀನನ್ನು ಕೋಳಿಗಳ ಆಹಾರವಾಗಿಯೂ ಬಳಸಲಾಗುತ್ತಿದೆ.

ವಿವಿಧ ರೇಷ್ಮೆ ಬಟ್ಟೆಗಳು: ರೇಷ್ಮೆಯ ವಿವಿಧ ಬಟ್ಟೆಗಳು ಬಹು ಜನರ ಮನಸ್ಸನ್ನು ಸೆಳೆದಿವೆ. ಅವುಗಳಲ್ಲಿ ಟಫ್ಫೇಟ, ಸ್ಯಾಟಿನ್, ಷಿಫಾನ್ ಕ್ರೇಪ್, ಕ್ರೇಪ್-ಡಿ-ಚೈನಿ, ಷನ್‍ತುಂಗ್, ಸುರಾ, ಆರ್ಗೆಂಜû ಮತ್ತು ಫೈಲಿ ಮುಂತಾದವು ಮುಖ್ಯ.

ಟಫ್ಫೆಟ: ರೇಷ್ಮೆಯ ಬಟ್ಟೆ ಅಥವಾ ನೂಲಿಗೆ ಬಣ್ಣ ಕಟ್ಟಿರುತ್ತಾರೆ. ಇದೊಂದು ಸಾಮಾನ್ಯ ತೂಕವುಳ್ಳ ರೇಷ್ಮೆ ಬಟ್ಟೆ. ಇದು ನಯವಾದ, ದೃಢವಾದ, ಅಪಾರದರ್ಶಕ ಹಾಗೂ ಸ್ವಲ್ಪಮಟ್ಟಿಗೆ ಹೊಳಪುಳ್ಳ ಬಟ್ಟೆ.

ಸ್ಯಾಟಿನ್: ಇದರಲ್ಲಿ ರೇಷ್ಮೆಬಟ್ಟೆಗೆ ಅಥವಾ ನೂಲಿಗೆ ಬಣ್ಣ ಕಟ್ಟಿರುತ್ತಾರೆ. ಸಾಮಾನ್ಯವಾಗಿ ಹೆಚ್ಚು ತೂಕವುಳ್ಳದ್ದು, ಹೊಳಪುಳ್ಳದ್ದು, ಹೆಚ್ಚು ನೆರಿಗೆಯುಳ್ಳದ್ದು ಮತ್ತು ದೃಢವಾದ್ದು.
ಷಿಫಾನ್: ಇದು ಹಗುರ, ಬಟ್ಟೆಗೆ ಬಣ್ಣ ಕಟ್ಟಿರುವ ರೇಷ್ಮೆ ಬಟ್ಟೆ. ಇದು ಅಪಾರದರ್ಶಕವಾದ್ದು. ಸ್ವಲ್ಪ ಹೊಳಪುಳ್ಳ ಇದು ಕಾಳಿನ ಹಾಗೆ ನೇಯ್ಗೆ ಹೊಂದಿರುತ್ತದೆ. ಕೆಲವೊಮ್ಮೆ ಚಿತ್ರ ನಮೂನೆಗಳ ಮುದ್ರಣ ಇದರ ಮೇಲಿರುತ್ತದೆ.

ಕ್ರೇಪ್-ಡಿ-ಚೈನ: ಇದು ಹಗುರವಾಗಿರುತ್ತದೆ. ಬಟ್ಟೆಗೆ ಬಣ್ಣ ಹಾಕಿರು ತ್ತಾರೆ. ಅಪಾರದರ್ಶಕ. ನಯವಾದ, ಸ್ವಲ್ಪಮಟ್ಟಿಗೆ ಸುಕ್ಕು ಬರುವ ನೇಯ್ಗೆಯುಳ್ಳ, ಅಂದವಾದ ನೆರಿಗೆಗಳುಳ್ಳ ಬಟ್ಟೆ ಇದು.
ಷನ್‍ತುಂಗ್ : ಈ ಬಟ್ಟೆಗೆ ಬಣ್ಣ ಕಟ್ಟಿರುತ್ತಾರೆ. ಹಗುರ ಅಥವಾ ಸ್ವಲ್ಪ ಭಾರ. ಅಪಾರದರ್ಶಕ, ಸಾಮಾನ್ಯ ಹೊಳಪುಳ್ಳ, ಜೋಡಿ ಗೂಡುಗಳಿಂದಾದ ಅಡ್ಡೆಎಳೆಗಳಿಂದ ಆಗಿರುತ್ತದೆ. ನಯವಾದ ನೇಯ್ಗೆಯುಳ್ಳ ಬಹುಜನಪ್ರಿಯವೆನಿಸಿರುವ ಬಟ್ಟೆ ಇದು.

ಸುರಾ: ಇದರಲ್ಲಿ ಬಟ್ಟೆ ಅಥವಾ ನೂಲಿಗೆ ಬಣ್ಣ ಕೊಟ್ಟಿರುತ್ತಾರೆ. ಅಮೆರಿಕದಲ್ಲಿ ಇದು ಕಂಠವಸ್ತ್ರಗಳನ್ನು (ನೆಕ್‍ಟೈ) ಮಾಡುವ ರೇಷ್ಮೆಯೆಂದೇ ಪ್ರಸಿದ್ಧಿಯಾಗಿದೆ. ಅಪಾರದರ್ಶಕ, ದೃಢವಾದ ನಯನೇಯ್ಗೆಯುಳ್ಳ ವಸ್ತು.

ಆರ್ಗೆಂಜû: ಇದು ಹಗುರವಾದ್ದು. ಅಂಟುನೂಲಿಗೆ ಬಣ್ಣ ಕಟ್ಟಿರುತ್ತಾರೆ. ಪಾರದರ್ಶಕ, ಸ್ವಲ್ಪಮಟ್ಟಿಗೆ ಹೊಳಪಿರುತ್ತದೆ. ಬಲೆಯಾಕಾರದ ದೃಢವಾದ, ಗಟ್ಟಿಯಾದ ನೇಯ್ಗೆಯಿರುವ ರೇಷ್ಮೆ.
ಫೈಲಿ: ನೂಲಿಗೆ ಬಣ್ಣಕಟ್ಟಿದ ಸಾಮಾನ್ಯ ಇಲ್ಲವೆ ಭಾರವೆನಿಸುವ ಬಟ್ಟೆ. ಅಪಾರದರ್ಶಕ. ದಪ್ಪಗಿರುವ, ನಯವಾದ, ದೃಢವಾದ ನೇಯ್ಗೆಯುಳ್ಳ ಮತ್ತು ಅಂಚಿನಿಂದ ಅಂಚಿನವರೆಗೆ ಅಡ್ಡಡ್ಡ ಎಳೆಗಳಿರುವ ಬಟ್ಟೆ. 

ಭಾರತದಲ್ಲೂ ರೇಷ್ಮೆ ಜನಪ್ರಿಯ. ಇವುಗಳಲ್ಲಿ  ಮೈಸೂರು ರೇಷ್ಮೆ, ಬನಾರಸ್ ರೇಷ್ಮೆ, ಕಾಂಜಿವರಂ ರೇಷ್ಮೆ ಮತ್ತು ಮೊಳಕಾಲ್ಮುರು ರೇಷ್ಮೆ ಹೀಗೆ ಹಲವಾರು ರೇಷ್ಮೆಗಳಿವೆ. ಅಂಚಿನ ವಿನ್ಯಾಸ, ಉಪಯೋಗಿ ಸಿದ ಚಿನ್ನದ ಎಳೆಗಳ ಬೆಲೆ ಇತ್ಯಾದಿಗಳ ಮೇಲೆ ಅವುಗಳ ಮೌಲ್ಯ ನಿರ್ಧಾರವಾಗುತ್ತದೆ. ರೇಷ್ಮೆಬಟ್ಟೆಯನ್ನು ಧರಿಸುವುದಕ್ಕೆ ಮಾತ್ರವಲ್ಲದೆ ಇತರ ಸನ್ನಿವೇಶಗಳಲ್ಲೂ ಉಪಯೋಗಿಸುವುದುಂಟು. 1942ರ ತನಕ ರೇಷ್ಮೆಯನ್ನು ಪ್ಯಾರಾಶೂಟ್‍ಗಳ ತಯಾರಿಕೆಯಲ್ಲಿ ಬಳಸುತ್ತಿದ್ದರು. ರೇಷ್ಮೆಯ ನಯ, ರೇಷ್ಮೆಯ ಸ್ಪರ್ಶ ಈ ಮೊದಲಾದ ಸರಳ ಪದಗಳ ವಾಕ್ಸರಣಿಯ ಬಳಕೆ ರೇಷ್ಮೆಯ ನಿಜಮೌಲ್ಯವನ್ನು ಸೂಚಿಸುತ್ತದೆ. 

ಭಾರತದ ಒಟ್ಟು ರೇಷ್ಮೆಯಲ್ಲಿ ಸೇ.80 ರಷ್ಟು ರೇಷ್ಮೆಯನ್ನು ಕರ್ನಾಟಕ ರಾಜ್ಯ ಪೂರೈಸುತ್ತಿದೆ.

	ಟಸ್ಸಾರ್ ರೇಷ್ಮೆ : ರಾಜ್ಯದ ಶಿರಸಿ, ಧಾರವಾಡ, ಬೆಳಗಾಂವಿ, ಬಿಳಿಗಿರಿ ರಂಗನ ಬೆಟ್ಟ ಹಾಗೂ ರಾಣೆಬೆನ್ನೂರು ಪ್ರಾಂತ್ಯಗಳಲ್ಲಿ ಕರಿ ಮತ್ತು ಬಿಳಿ ಮತ್ತಿಮರಗಳು ಹಾಗೂ ಹಾರ್ಡಿವಿಕಿಯ ಮರಗಳು ಸಮೃದ್ಧಿಯಾಗಿ ಬೆಳೆಯುತ್ತವೆ. ಇವುಗಳ ಎಲೆಗಳು ಟಸ್ಸಾರ್ ಜಾತಿಯ ರೇಷ್ಮೆ ಹುಳುಗಳಿಗೆ ಒಳ್ಳೆಯ ಆಹಾರ. ಇದನ್ನು ಉಪಯೋಗಿಸಿಕೊಂಡು ಟಸ್ಸಾರ್ ಬೆಳೆಯನ್ನು ಅಭಿವೃದ್ಧಿಮಾಡಲು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. 						
(ಟಿ.ಎಂ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ